ಚೀನಾದಲ್ಲಿ ಬುಧವಾರದಿಂದ (ಸೆಪ್ಟೆಂಬರ್ 1) ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದೆ. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಹೊಸ ಪಠ್ಯಪುಸ್ತಕಗಳು ಸ್ವಾಗತಿಸಿವೆ. ಹೊಸ ಪಠ್ಯಪುಸ್ತಕದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಕುರಿತ ವಿಚಾರಧಾರೆಗಳೇ ತುಂಬಿ ತುಳುಕಾಡುತ್ತಿವೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಆಶಯಗಳನ್ನು ಚಿಕ್ಕ ಮಕ್ಕಳಲ್ಲಿ ಬಾಲ್ಯದಿಂದಲೇ ಮೊಳಕೆಯೂಡಿಸುವ ಪ್ರಯತ್ನವಾಗಿ ಚೀನಾ ಸರ್ಕಾರ ಶಾಲಾಪಠ್ಯವನ್ನು ಪುನಃರೂಪಿಸಿದೆ. ಎಳವೆಯಲ್ಲೇ ಷಿ ಜಿನ್ಪಿಂಗ್ ( Xi Jinping), ಕಮ್ಯುನಿಸ್ಟ್ ಪಕ್ಷ ಮತ್ತು ಚೀನಾದ ಕುರಿತು ಧನಾತ್ಮಕ ಭಾವನೆಯನ್ನು ಅಚ್ಚಾಗಿಸುವುದು ಚೀನಾ ಸರ್ಕಾರದ ದೂರಾಲೋಚನೆಯ ಒಂದು ಭಾಗವಾಗಿದೆ.
ಹೊಸ ಪಠ್ಯಪುಸ್ತಕದಲ್ಲಿ ಷಿ ಜಿನ್ಪಿಂಗ್ ಅವರ ನಗುಮೊಗದ ಚಿತ್ರಗಳು ಹೇರಳವಾಗಿವೆ. ಅವರ ಜನತೆಗೆ ಕೊಟ್ಟ ಕರೆ, ಬಡತನ ಹೊಗಲಾಡಿಸಲು ಷಿ ಜಿನ್ಪಿಂಗ್ ನೀಡಿದ ಕೊಡುಗೆಗಳ ಬಗ್ಗೆ ಪುಷ್ಕಳ ಪಾಠಗಳನ್ನು ರೂಪಿಸಲಾಗಿದೆ. ಅಲ್ಲದೇ ಕೊವಿಡ್ 19 ವೈರಾಣು ಹರಡುವಿಕೆಯನ್ನು ಚೀನಾ ಸಮರ್ಥವಾಗಿ ತಡೆಗಟ್ಟಿದೆ ಎಂದು ಬಿಂಬಿಸಲಾಗಿದೆ.
ಶಾಲಾ ವಿದ್ಯಾರ್ಥಿಗಳಿಗೆ ರೂಪಿಸಲಾದ ಪಾಠವೊಂದರ ಪಠ್ಯ ಹೀಗೆ ವಿವರಿಸುತ್ತದೆ- ‘ನಮ್ಮೆಲ್ಲರ ಪ್ರೀತಿಯ ಷಿ ಜಿನ್ಪಿಂಗ್ ಅಜ್ಜ ಕೆಲಸಗಳಲ್ಲಿ ಎಷ್ಟೇ ನಿರತರಾಗಿದ್ದರೂ, ನಮ್ಮ ಚಟುವಟಿಕೆಗಳಲ್ಲಿ ಅವರು ಭಾಗವಹಿಸುತ್ತಾರೆ, ಜತೆಗೆ ಅವರು ನಮ್ಮನ್ನು ಜೋಪಾನ ಮಾಡುತ್ತಾರೆ.’ ಜತೆಗೆ ಷಿ ಜಿನ್ಪಿಂಗ್ ಅವರ 14 ಚಿಂತನೆಗಳನ್ನು ಸಹ ಸೇರಿಸಲಾಗಿದ್ದು, ಚೀನಾದ ಮಿಲಿಟರಿಯ ಮೇಲೆ ಕಮ್ಯುನಿಸ್ಟ್ ಪಕ್ಷದ ಹಿಡಿತ, ಅಭಿವೃದ್ಧಿಯಿಂದ ಜೀವನ ಮಟ್ಟದ ಸುಧಾರಣೆಗಳ ಕುರಿತು ವಿವರಿಸಲಾಗಿದೆ.
ಚೀನಾ, ಕಮ್ಯುನಿಸ್ಟ್ ಪಾರ್ಟಿ ಮತ್ತು ಅಧ್ಯಕ್ಷ ಷಿ ಜಿನ್ಪಿಂಗ್ ಬಗ್ಗೆ ಆಳವಾದ ಧನಾತ್ಮಕ ಅಭಿಪ್ರಾಯವನ್ನು ಮಕ್ಕಳ ಬಾಲ್ಯದಲ್ಲೇ ಪಠ್ಯಕ್ರಮದ ಮೂಲಕ ಮೂಡಿಸುವುದು ಪಠ್ಯಕ್ರಮ ಪುನರಚಿಸಿದ ಮುಖ್ಯ ಉದ್ದೇಶವಾಗಿದೆ. ತಮ್ಮ ಉದ್ದೇಶಗಳಿಂದ ಹೊರತಾದ ಇತರ ಯಾವುದೇ ವಿಚಾರಧಾರೆಗಳು ಮಕ್ಕಳನ್ನು ಪ್ರಭಾವಿಸುವುದು ಚೀನಾದ ಕಮ್ಯುನಿಸ್ಟ್ ಸರ್ಕಾರಕ್ಕೆ ಕಿಂಚಿತ್ ಇಷ್ಟವಿಲ್ಲ. ಆಟದ ಸಾಮಾಗ್ರಿ, ವಿಡಿಯೊ ಗೇಮ್ ಮತ್ತು ಶೈಕ್ಷಣಿಕ ಸಾಮಾಗ್ರಿಯವರೆಗೂ ಚೀನಾವನ್ನು ಹೊರತುಪಡಿಸಿ ಇತರ ದೇಶಗಳ ವಸ್ತುಗಳು ಮಕ್ಕಳಿಗೆ ತಲುಪುವನ್ನು ಚೀನಾ ತಡೆಯುತ್ತಿದೆ.
ಹಿಂದಿನ ಸಿಲೇಬಸ್ ಹೇಗಿತ್ತು?
ಚೀನಾದ ಶಾಲೆಗಳಲ್ಲಿ ಈ ಹಿಂದೆ ಕಲಿಸುತ್ತಿದ್ದ ಪಠ್ಯಕ್ರಮ ಅಷ್ಟು ಸರಳವಾಗಿರಲಿಲ್ಲ. ಆಧುನಿಕ ಸಮಾಜವಾದದ ಶಕ್ತಿಶಾಲಿ ದೇಶವಾಗಿ ಚೀನಾ ಹೊರಹಮ್ಮಿದ ಬಗೆ ಎಂಬ ವಿಷಯವನ್ನೇ ಕೇಂದ್ರವಾಗಿಸಿಕೊಂಡು ಈ ಹಿಂದೆ ಮಕ್ಕಳಿಗೆ ಕಲಿಸಲಾಗುತ್ತಿತ್ತು. ಪರಿಷ್ಕೃತ ಪಠ್ಯಕ್ರಮವು ಅಧ್ಯಕ್ಷ ಷಿ ಜಿನ್ಪಿಂಗ್ ಮತ್ತು ಕಮ್ಯುನಿಸ್ಟ್ ಪಾರ್ಟಿಯನ್ನೇ ಕೇಂದ್ರೀಕರಿಸಿಕೊಂಡಿದೆ. ಇದು ಹಲವು ಪಾಲಕರ ಚಿಂತೆಗೆ ಕಾರಣವಾಗಿದೆ. ಆದರೆ ಯಾವುದೇ ಪಾಲಕರು ತಮ್ಮ ಚಿಂತೆಯನ್ನು ಬಹಿರಂಗಪಡಿಸುವಂತಿಲ್ಲ. ಜೀವನ ಉಳಿಯಬೇಕೆಂದರೆ ಸರ್ಕಾರ ಹೇಳಿದ್ದನ್ನೇ ಶಿರಸಾ ವಹಿಸಿ ಪಾಲಿಸಬೇಕಿಲ್ಲಿ, ಬೇರೆ ಆಯ್ಕೆಯಿಲ್ಲ ಎಂದು ಎಪಿಎಫ್ ಸುದ್ದಿಸಂಸ್ಥೆಗೆ ಅತ್ಯಂತ ಗುಟ್ಟಾಗಿ ಕೆಲವು ಪಾಲಕರು ಅಳಲು ತೋಡಿಕೊಂಡಿದ್ದಾರೆ.