ನಿನ್ನೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಸನ ಜಿಲ್ಲೆಯ ಹಲವೆಡೆ ಸಭೆ ನಡೆಸಿದ್ದರು. ಸಕಲೇಶಪುರದಲ್ಲಿ ಸಭೆ ನಡೆಸುವ ವೇಳೆ ಯುವಕರು ಅಡ್ಡಿಪಡಿಸಿದ್ದಾರೆ. ಪ್ರತಿಭಟನಾಕಾರರನ್ನು ಸುಮ್ಮನಿರಿಸಲು ಪೊಲೀಸರು ಹರಸಾಹಸ ಪಟ್ಟರು.
ಹಾಸನ: ಬಸವಜಯ ಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji) ವಿರುದ್ಧ ಯುವಕರು ಆಕ್ರೋಶ ಹೊರಹಾಕಿದ್ದಾರೆ. ಸ್ವಾಮೀಜಿ ಭಾಷಣದ ವೇಳೆ ಯುವಕರು ಧಿಕ್ಕಾರ ಕೂಗಿದ್ದು, ಈ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ. ಸಕಲೇಶಪುರ ಪಟ್ಟಣದ ಕಲಾಸಗಿ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಸಮಾಜವನ್ನು ಒಡೆಯಲು ಈ ರೀತಿ ಕಾರ್ಯಕ್ರಮ ಮಾಡುತ್ತಿದ್ದೀರಿ ಎಂದು ಸ್ವಾಮೀಜಿ ವಿರುದ್ಧ ಯುವಕರು ಕಿಡಿ ಕಾರಿದ್ದಾರೆ.
ನಿನ್ನೆ (ಆಗಸ್ಟ್ 31) ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಸನ ಜಿಲ್ಲೆಯ ಹಲವೆಡೆ ಸಭೆ ನಡೆಸಿದ್ದರು. ಸಕಲೇಶಪುರದಲ್ಲಿ ಸಭೆ ನಡೆಸುವ ವೇಳೆ ಯುವಕರು ಅಡ್ಡಿಪಡಿಸಿದ್ದಾರೆ. ಪ್ರತಿಭಟನಾಕಾರರನ್ನು ಸುಮ್ಮನಿರಿಸಲು ಪೊಲೀಸರು ಹರಸಾಹಸ ಪಟ್ಟರು. ಕಡೆಗೆ ಸಭೆ ಮೊಟಕುಗೊಳಿಸಿ ಜಯ ಮೃತ್ಯುಂಜಯ ಸ್ವಾಮೀಜಿ ತೆರಳಿದರು.
ಸಭೆಯಲ್ಲಿ ವೀರಶೈವ ಲಿಂಗಾಯತ ಮುಖಂಡ ಕಟ್ಟಾಯ ಶಿವಕುಮಾರ್ ವಿರುದ್ಧ ದಿಕ್ಕಾರ ಕೂಗಿದ ಯುವಕರಿಗೆ, ಕೆಲ ಮುಖಂಡರು ಬೆಂಬಲ ನೀಡಿದ್ದಾರೆ. ನೀವು ಈ ಹಿಂದಿನ ಸರ್ಕಾರಗಳ ಸಂದರ್ಭ ಮೀಸಲಾತಿ ಹೋರಾಟ ಮಾಡಲಿಲ್ಲ. ಆದರೆ ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ಹೋರಾಟ ಮಾಡಿದ್ದೀರ. ಇದು ನಮ್ಮ ಸಮಾಜಕ್ಕೆ ಮತ್ತು ಯಡಿಯೂರಪ್ಪಗೆ ಮಾಡಿದ ಅವಮಾನ. ವರುಣಾದಲ್ಲಿ ಪಱಯ ಅಭ್ಯರ್ಥಿ ಹುಡುಕಲು ಹೇಳಿದ್ದೀರಿ. ವಿಜಯೇಂದ್ರಗೆ ಪರ್ಯಾಯ ಅಭ್ಯರ್ಥಿ ಹುಡುಕುವುದಕ್ಕೆ ಕರೆ ಕೊಟ್ಟಿದ್ದೀರಿ. ಇವು ಏನನ್ನು ಸೂಚಿಸುತ್ತವೆ ಉತ್ತರಿಸಿ ಎಂದು ಸ್ವಾಮೀಜಿಗೆ ಪ್ರಶ್ನೆ ಮಾಡಿದ್ದಾರೆ.
ಅ.1ರಿಂದ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ?
ಪಂಚಮಸಾಲಿ ಸಮಾಜಕ್ಕೆ ಮುಂದಿನ ಸೆ.30ರ ಒಳಗೆ 2ಎ ಮೀಸಲಾತಿ ಘೋಷಿಸಬೇಕು. ಇಲ್ಲದಿದ್ದರೆ ಅ.1ರಿಂದ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗಸ್ಟ್ 9ಕ್ಕೆ ಹೇಳಿದ್ದಾರೆ. ಸೂಕ್ತ ಸಮಯಕ್ಕೆ ಸೂಕ್ತ ಮುಖ್ಯಮಂತ್ರಿ ಬಂದಿದ್ದಾರೆ ಎಂದು ಹರ್ಷವ್ಯಕ್ತಪಡಿಸಿದ ಅವರು, ಈ ಹಿಂದೆ ಧರಣಿ ವೇಳೆ ಬಸವರಾಜ ಬೊಮ್ಮಾಯಿ ಗೃಹಸಚಿವರಾಗಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಶಿಗ್ಗಾಂವಿಯಲ್ಲಿ ಬೊಮ್ಮಾಯಿ 3 ಬಾರಿ ಗೆಲ್ಲಲು ನಮ್ಮ ಸಮಾಜ ಕಾರಣ. ಪಂಚಮಸಾಲಿ ಸಮುದಾಯಕ್ಕೆ ಸೇರಿದವರಿಗೆ ಮುಖ್ಯಮಂತ್ರಿ ಸ್ಥಾನ ಸಿಗದ ಕಾರಣ ಬೇಸರವಿದೆ. ಈ ಬೇಸರ ನಿವಾರಣೆ ಆಗಬೇಕಾದರೆ ಮೀಸಲಾತಿ ನೀಡಬೇಕು ಎಂದು ಸಲಹೆ ಮಾಡಿದರು.